ಜಂಬೂರು ಮಹಾಕಾಳಯ್ಯ -
ಸು. 1160 ಒಬ್ಬ ಶಿವಶರಣ. ಕಾಳಯ್ಯ ನಿಜನಾಮ. ಜಂಬೂರು ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪಕ್ಕೆ ಸುಮಾರು ನಾಲ್ಕು ಮೈಲಿ ದೂರದಲ್ಲಿದೆ. ಇದಕ್ಕೆ ಹಿರಿಯ ಜಂಬೂರು ಎಂಬ ಹೆಸರೂ ಕಂಡುಬರುತ್ತದೆ. ಈ ಊರಿನಲ್ಲಿ ಕಾಳಯ್ಯ ಶ್ರೇಷ್ಠ ಶಿವಾನುಭವಿಯಾಗಿದ್ದ. ಲಿಂಗಾನುಸಂಧಾನಿಯಾದ ಕಾಳಯ್ಯ ತನ್ನ ಆಚರಣೆಯಿಂದ ತನ್ನ ಪ್ರಾಣವನ್ನು ತನ್ನ ಅಧೀನದಲ್ಲೇ ಇಟ್ಟುಕೊಂಡಿದ್ದುದಲ್ಲದೆ ತನ್ನ ಶಿರವನ್ನು ಲಿಂಗಕ್ಕೆ ಅರ್ಪಿಸಿ ಮತ್ತೆ ಅದನ್ನು ಪಡದುಕೊಳ್ಳುವ ಸಾಮಥ್ರ್ಯ ಪಡೆದಿದ್ದನೆಂದು ಹೇಳಲಾಗಿದೆ.

	ಒಮ್ಮೆ ಕಾಳಯ್ಯ ತಮ್ಮ ಅಗ್ರಹಾರದ ಕಡೆ ಬರುತ್ತಿದ್ದುದನ್ನು ಕಂಡ ವಿಪ್ರರು ಆತನನ್ನು ದಾರಿಯಲ್ಲೆ ತಡೆದು ವೇದಪಠನ ಮಾಡುವಲ್ಲಿಗೆ ಶಿವಭಕ್ತರು ಬರಬಾರದೆಂದು ತಿಳಿಸಿದರು. ಅದನ್ನು ಕೇಳಿದ ಕಾಳಯ್ಯ ಶಿವಭಕ್ತಿಯಿಲ್ಲದ ವಿಪ್ರ ಶ್ವಪಚನಿಗಿಂತಲೂ ಕಡೆ ಎಂದ. ಆಗ ಆ ದ್ವಿಜರು ವೇದವನ್ನು ಬಿಟ್ಟು ದೈವವಿಲ್ಲ. ವೇದವೇ ಶಿವ, ಹರಿ. ಆದುದರಿಂದ ವೇದವನ್ನು ಬಲ್ಲಾತನೇ ಕುಲದಲ್ಲಿ ಅಧಿಕಜನಾದವ. ಅದಿಲ್ಲದವ ಶಿವಭಕ್ತನಾದರೂ ಕುಲಹೀನ ಎಂದರು. ವೇದ ಅಧಿಕವಾದರೆ ಅದು ಶಿವನ ಪಾದದಲ್ಲಿ ಶುನಿಯಾಗಿ ಇರಬಲ್ಲುದೆ ಎಂದು ಕಾಳಯ್ಯ ಅವರನ್ನು ಪ್ರಶ್ನಿಸಲು ಅವರು ಶಿವಭಕ್ತರು ವೇದಗಳಿಗಿಂತಲೂ ಅಧಿಕರು ಎಂಬ ವೇದಭಾಗವನ್ನು ಶ್ವಾನನಿಂದ ಓದಿಸಿ ಸಿದ್ಧಪಡಿಸಿ ತೋರಿಸು ಎಂದು ಹೇಳಿದರು. ಆ ಕೂಡಲೇ ಕಾಳಯ್ಯ ಹೊಲಗೇರಿಯಿಂದ ಒಂದು ನಾಯಿಯನ್ನು ತರಿಸಿ ಅದರ ಬಾಯಿಂದ ಆ ವಾಕ್ಯವನ್ನು ಹೇಳಿಸಲಾಗಿ ಅಲ್ಲಿ ನೆರದಿದ್ದ ವಿಪ್ರರೆಲ್ಲರೂ ನಾಚಿ ಕಾಳಯ್ಯನಿಗೆ ನಮಸ್ಕರಿಸಿ ಹೊರಟು ಹೋದರು.

	ಜಂಬೂರಿನಲ್ಲಿ ಈಗಲೂ ಮಹಾಕಾಳಯ್ಯನ ವಿಗ್ರಹವೂ ವೇದವನ್ನು ಓದುತ್ತಿರುವ ನಾಯಿಯ ವಿಗ್ರಹವೂ ಇವೆಯಂತೆ.
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

	ಈತನ ವಿಷಯ ಬಸವೇಶ್ವರ ಪುರಾಣದ ಕಥಾಸಾಗರ, ಪಾಲ್ಕುರಿಕೆ ಸೋಮೇಶ್ವರ ಪುರಾಣ, ಬಸವಪುರಾಣ, ಭೈರೇಶ್ವರ ಕಾವ್ಯದ ಕಥಾಸೂತ್ರರತ್ನಾಕರ, ಶಿವತತ್ತ್ವ ಚಿಂತಾಮಣಿ, ವೀರಶೈವಾಮೃತ ಮಹಾಪುರಾಣ, ಪ್ರೌಢರಾಯನ ಕಾವ್ಯ, ಗುರು ರಾಜಚಾರಿತ್ರ, ಸಾನಂದ ಚರಿತೆ ಮೊದಲಾದ ಗ್ರಂಥಗಳಲ್ಲಿ ಕಂಡುಬರುತ್ತದೆ.
(ಎನ್.ಬಿ.)